ಡುಪ್ಯೀಟ್ರಾನ್, ಗಿಲ್ಲೋಮೆ
	1777-1835. ಫ್ರಾನ್ಸಿನ ಶಸ್ತ್ರವೈದ್ಯ ಮತ್ತು ಅಂಗರಚನಾವಿದ. ಶಸ್ತ್ರಕ್ರಿಯಾವಿಧಾನಗಳನ್ನು ಸುಧಾರಿಸಿದ್ದು ಮಾತ್ರವಲ್ಲ ಹೊಸ ಉಪಕರಣಗಳನ್ನು ಉಪಜ್ಞಿಸಿದ ಕೂಡ. ಡುಪ್ಯೀಟ್ರಾನ್ ತೀರ ಬಡ ಕುಟುಂಬದಲ್ಲಿ ಹುಟ್ಟಿ (5-10-1777) ಸ್ವಂತ ಪರಿಶ್ರಮ ಸಾಮಥ್ರ್ಯಗಳಿಂದ ಮುಂದೆ ಬಂದು ವೈದ್ಯಶಾಸ್ತ್ರವನ್ನು ಅಧ್ಯಯಿಸಿ 1802ರಲ್ಲಿ ಡಿ ಯು ಆಸ್ಪತ್ರೆಯಲ್ಲಿ ಶಸ್ತ್ರವೈದ್ಯನಾದ. ಶಸ್ತ್ರಚಿಕಿತ್ಸೆಯಲ್ಲಿ ಆಗಾಧ ಚಾತುರ್ಯವನ್ನು ಪ್ರದರ್ಶಿಸಿ ಚಿಕಿತ್ಸೆಯಲ್ಲಿ ಅನೇಕ ಹೊಸತಂತ್ರಗಳನ್ನೂ ಉಪಕರಣಗಳನ್ನೂ ಶೋಧಿಸಿದ. ಮೂವತ್ತೆಂಟನೆಯ ವಯಸ್ಸಿನಲ್ಲಿ ಶಸ್ತ್ರವೈದ್ಯ ಶಾಸ್ತ್ರದ ಪ್ರಾಧ್ಯಾಪಕನಾದ. ಈತ ನೀಡುತ್ತಿದ್ದ ಪಾಂಡಿತ್ಯಪೂರ್ಣ ಉಪನ್ಯಾಸಗಳು ಮತ್ತು ರೋಗನಿದಾನ ಹಾಗೂ ಚಿಕಿತ್ಸೆಯಲ್ಲಿ ತೋರುತ್ತಿದ್ದ ಕಾರ್ಯಕೌಶಲ ಅನೇಕ ರಾಷ್ಟ್ರಗಳಿಂದ ವಿದ್ಯಾರ್ಥಿಗಳನ್ನು ಇವನೆಡೆಗೆ ಆಕರ್ಷಿಸಿದವು. ಈತನ ಶಸ್ತ್ರಕೌಶಲಕ್ಕೆ ಸರ್ಕಾರೀ ಮಾನ್ಯತೆಯನ್ನು ನೀಡಲಾಯಿತು. 18ನೆಯ ಲ್ಯೂಯಿ ಮತ್ತು ಹತ್ತನೆಯ ಚಾರಲ್ಸ್ ದೊರೆಗಳಿಗೆ ಡುಪ್ಯೀಟ್ರಾನನು ಶಸ್ತ್ರಚಿಕಿತ್ಸಕನಾಗಿ ನೇಮಕಗೊಂಡಿದ್ದ. ರಕ್ತನಾಳ ರೋಗಗಳು, ಕಾಳಗದಲ್ಲಿ ಉಂಟಾದ ಹುಣ್ಣುಗಳು, ಮುಂದೆ ಕಣಕಾಲ, ಹೊರ ಎಲುಬು ಶಸ್ತ್ರಚಿಕಿತ್ಸೆ - ಇವುಗಳಲ್ಲಿ ಹೊಸ ವಿಧಾನಗಳನ್ನು ಬಳಕೆಗೆ ತಂದ. ಅಂಗೈ ತಂತುಕಟ್ಟಿನ ಬಿಗಿತದಿಂದ ಕೈಬೆರಳುಗಳು ಹಿಂದಕ್ಕೆಳೆಯಲ್ಪಟ್ಟು ಉಂಟಾದ ವಿಕಲತೆಯನ್ನು ಅಭ್ಯಸಿಸಿ, ಆ ತಂತುಕಟ್ಟಿನ ಅಡ್ಡಕೊಯ್ತ ಬೆರಳುಗಳ ಸರಾಗ ಚಲನೆಗೆ ಸಹಾಯಕವಾಗುವುದೆಂದು ತೋರಿಸಿದ; ಅಂಗೈಯಲ್ಲಿ ಉಂಟಾಗುವ ಆ ತೆರನಾದ ಎಳೆದುಕೊಳ್ಳುವಿಕೆಗೆ ಡುಪ್ಯೀಟ್ರಾನನ ಎಳೆದುಕೊಳ್ಳುವಿಕೆ ಎಂದೇ ಹೆಸರಿಡಲಾಗಿದೆ. ಡುಪ್ಯೀಟ್ರಾನನು ಬಲು ಧೈರ್ಯವಂತನಾದ ಶಸ್ತ್ರಕಾರ್ಯತಜ್ಞ. ಎಂಥ ಆತಂಕ ಸನ್ನಿವೇಶಗಳಲ್ಲೂ ಮನಸ್ಸಿನ ಸ್ಥೈರ್ಯವನ್ನು ಕೆಡಿಸಿಕೊಳ್ಳುತ್ತಿರಲಿಲ್ಲ. ಶಸ್ತ್ರಕ್ರಿಯೆಯಿಂದ ಕೆಳದವಡೆಯನ್ನು ಪೂರ್ತಿಯಾಗಿ ತೆಗೆದು ಹಾಕಿದ ಮೊದಲಿಗ (1812). ಏಡಿಗಂತಿ ಚಿಕಿತ್ಸೆಗೆ ಗರ್ಭಕೋಶದ ಕಂಠವನ್ನು ಶಸ್ತ್ರಕ್ರಿಯೆಯಿಂದ ಪ್ರಥಮವಾಗಿ ತೆಗೆದು ಹಾಕಿದ್ದೂ ಇವನೇ. ತೊಡೆ ಕೀಲಿನ ಆಜನ್ಮ ಸರಿತವನ್ನು (ಕನ್‍ಜೆನಿಟಲ್ ಡಿಸ್‍ಲೊಕೇಷನ್ ಆಫ್ ದಿ ಹಿಪ್) ವಿಶದವಾಗಿ, ವೈe್ಞÁನಿಕವಾಗಿ ಮೊದಲು ವಿವರಿಸಿದ್ದೂ ಇವನೇ (1826).
ಮರಣ ಪ್ಯಾರಿಸಿನಲ್ಲಿ (8-2-1835).
(ಪಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ